ನಿಗ್ರಹಾನುಗ್ರಹಸಮರ್ಥರಾಗಿದ್ದ ನಾರದರಿಗೂ ಅನ್ಯರಿಂದ ಶಾಪ ಬಂದಿತ್ತು; ಆಗೀಗ ಅಪಮಾನಗಳೂ ಆಗಿದ್ದವು. ಇವುಗಳ ಸೂಚನೆಯನ್ನು ನಾವು ಮುನ್ನವೇ ಕಂಡೆವಾದರೂ ಅವುಗಳ ಕೆಲವು ವಿವರಗಳನ್ನೀಗ ನೋಡಬಹುದು. ಹಿಂದೊಮ್ಮೆ ಇಂದ್ರಸಭೆಯಲ್ಲಿ ಉರ್ವಶಿಯ ನೃತ್ಯಕ್ಕಾಗಿ ನಾರದರು ವೀಣಾವಾದನ ಮಾಡುತ್ತಿದ್ದರಂತೆ. ಆಗ ಅವಳು ಅಲ್ಲಿದ್ದ ಇಂದ್ರಪುತ್ರ ಜಯಂತನನ್ನು ನೋಡಿ ಮರುಳಾಗಿ ತಾಳ ತಪ್ಪಿದಳು. ಇದನ್ನು ಲೇವಡಿ ಮಾಡಲೆಂದು ನಾರದರು ತಾವು ಕೂಡ ಬೇಕೆಂದೇ ಶ್ರುತಿ ತಪ್ಪಿದರಂತೆ. ಇದನ್ನೆಲ್ಲ ಕಂಡು ಕನಲಿದ ಅಗಸ್ತ್ಯರು ಇಬ್ಬರನ್ನೂ ಶಪಿಸಿದ್ದಲ್ಲದೆ ಮಹತೀ ವೀಣೆಗೂ ಶಾಪವಿತ್ತರಂತೆ! (ವಾಯುಪುರಾಣ). ಹದಿನಾರು ಸಾವಿರದ ಎಂಟು ಮಂದಿ ಹೆಂಡಿರೊಡನೆ ಶ್ರೀಕೃಷ್ಣನೊಬ್ಬನೇ ಹೇಗೆ ಸಂಸಾರವನ್ನು ಸಾಗಿಸುತ್ತ ಇದ್ದಾನೆಂಬ ಕುತೂಹಲದಿಂದ ಒಮ್ಮೆ ನಾರದರು ದ್ವಾರಕೆಯ ಅಂತಃಪುರಗಳಿಗೆಲ್ಲ ನುಗ್ಗಿ ನೋಡಿದರಂತೆ. ಎಲ್ಲೆಲ್ಲಿಯೂ ಶ್ರೀಕೃಷ್ಣನೇ ಕಂಡುಬಂದ! ಅದನ್ನು ನೋಡಿ ತಮ್ಮ ಅಜ್ಞಾನಕ್ಕಾಗಿ ನಾಚಿ ಅನಂತನೂ ಸರ್ವವ್ಯಾಪ್ತನೂ ಆದ ಅವನಲ್ಲಿ ಕ್ಷಮೆ ಯಾಚಿಸಿದರಂತೆ (ಭಾಗವತ). ಒಮ್ಮೆ ಮಹಾಲಕ್ಷ್ಮಿಯ ಜನ್ಮದಿನದಂದು ವೈಕುಂಠದಲ್ಲಿ ಆಕೆಯ ಚೇಟಿಯರಿಂದ ನಾರದರು ಅವಮಾನಕ್ಕೆ ತುತ್ತಾದರು. ಮಾತ್ರವಲ್ಲ, ಗಾಯಕ್ಕೆ ಉಪ್ಪು ಸವರಿದಂತೆ ಅಲ್ಲಿ ತನ್ನ ಸಂಗೀತಪ್ರತಿಸ್ಪರ್ಧಿ ತುಂಬುರುವಿಗೆ ಹೆಚ್ಚಿನ ಆದರ ದಕ್ಕಿದ್ದನ್ನೂ ಕಂಡರು. ಈ ಸಂಕಟವನ್ನು ಶ್ರೀಹರಿಯಲ್ಲಿ ಹೇಳಿಕೊಂಡಾಗ ಆತ ಸಾಂತ್ವನದ ಮಾತುಗಳನ್ನೇನೂ ಹೇಳದೆ ಸುಮ್ಮನೆ ಮರುಮುಂಜಾನೆ ತುಂಬುರುವಿನ ಮನೆಗೆ ಹೋಗಿ ಅಲ್ಲಿ ಏನು ನಡೆಯುವುದೋ ಅದನ್ನು ನೋಡುವಂತೆ ತಿಳಿಸಿದ. ಆಗ ನಾರದರು ಕಂಡದ್ದು ತನ್ನ ಪ್ರತಿಸ್ಪರ್ಧಿಯ ಮನೆಯ ಪಡಸಾಲೆಯಲ್ಲಿ ಬಿದ್ದು ನರಳುತ್ತಿರುವ ನೂರಾರು ಜೀವಗಳನ್ನು! ಅವರೆಲ್ಲ ವಿಕಲಾಂಗರಾಗಿ, ಗಾಯಾಳುಗಳಾಗಿ ದೀನಸ್ಥಿತಿಯಲ್ಲಿದ್ದರು. ಅವರನ್ನು ನಾರದರೇ ಪ್ರಶ್ನಿಸಿದಾಗ ತಿಳಿದದ್ದಿಷ್ಟು: ಆ ಗುಂಪೆಲ್ಲ ಸ್ವರದೇವತೆಗಳಂತೆ; ರಾಗ-ರಾಗಿಣಿಯರಂತೆ. ನಾರದರ ಅಪಸ್ವರದ ಹಾಡಿಕೆಯ ದಾಳಿಗೆ ತುತ್ತಾಗಿ ಅವರ ಒಡಲೆಲ್ಲ ಹೀಗೆ ಗಾಸಿಗೊಂಡಿದೆ! ಇದನ್ನು ಕೇವಲ ತುಂಬುರುವೊಬ್ಬನೇ ಸರಿಪಡಿಸಬಲ್ಲ. ಅವನು ಸುಸ್ವರದಿಂದ ಹಾಡಿದಂತೆಲ್ಲ ಇವರ ಒಡಲುಗಳು ಅಂದವಾಗಿ, ಅವಿಕಲವಾಗಿ ಅಣಿಗೊಳ್ಳುವುವಂತೆ! ಇದನ್ನರಿತ ನಾರದರಿಗೆ ತಲೆ ತೆಗೆದಂತಾಯಿತು. ಮತ್ತೆ ಹರಿಯ ಬಳಿಗೆ ಹೋಗಿ ತಮ್ಮ ಸಂಗೀತವನ್ನು ತಿದ್ದಿಕೊಳ್ಳುವ ಬಗೆ ಹೇಗೆಂದು ಯಾಚಿಸಿದರು. ಆಗಲೇ ಗಾನಬಂಧುವಿನಿಂದ ಕಲಿಕೆ ಆಯಿತು. ಅನಂತರ ಶ್ರೀಕೃಷ್ಣಾವತಾರದಲ್ಲಿ ಆತನ ಅಷ್ಟಮಹಿಷಿಯರಿಂದ ಶಿಕ್ಷಣ ದಕ್ಕಿದ್ದಲ್ಲದೆ ಸ್ವಯಂ ಸ್ವಾಮಿಯಿಂದಲೇ ಪಾಠವಾಯಿತಂತೆ (ಪದ್ಮಪುರಾಣ). ಹೀಗೆ ಸಂಗೀತದಲ್ಲಿ ಸಿದ್ಧಿಯನ್ನು ಗಳಿಸಿದ ಬಳಿಕ ನಾರದ-ತುಂಬುರುಗಳ ನಡುವೆ ಸ್ಪರ್ಧೆ ಉಂಟಾಯಿತು. ಆಗ ತೀರ್ಪನ್ನೀಯಲು ಹನುಮಂತನನ್ನೇ ಶ್ರೀಕೃಷ್ಣನು ಆಹ್ವಾನಿಸಿದ. ಈ ವೃದ್ಧ ವಾನರನು ಯಾವ ಮಾತ್ರದ ಸಂಗಿತವನ್ನು ಬಲ್ಲನೆಂದು ಸ್ಪರ್ಧಿಗಳಿಬ್ಬರೂ ಉಪೇಕ್ಷೆಯ ನೋಟ ಬೀರಿದಾಗ ಒಡೆಯನ ಆಣತಿಯಂತೆ ಆಂಜನೇಯನು ಹಾಡಿ ಇಬ್ಬರ ಗರ್ವಪರ್ವತಗಳನ್ನೂ ಪುಡಿಗುಟ್ಟಿದನಂತೆ (ಅದ್ಭುತರಾಮಾಯಣ).
ಬರ್ದಿಲರ ಬಾತ್ಮೀದಾರ!
ಅಂತೂ ನಾರದರು ಏನೆಲ್ಲ ಬಗೆಯ ಏರಿಳಿತಗಳನ್ನು ಕಂಡರು; ಎಂಥ ಎಲ್ಲ ಅನುಭವಗಳನ್ನು ಗಳಿಸಿದರೆಂದು ಈವರೆಗೆ ತಿಳಿದದ್ದಾಯಿತು. ಇನ್ನು ಮುಂದೆ ಸಂದೇಶವಾಹಕರಾಗಿ, ಸಮಾವೇಶಗಳ ಸದಸ್ಯರಾಗಿ ಅವರ ಪಾತ್ರವನ್ನು ಸ್ವಲ್ಪ ನೋಡೋಣ. ಮೊದಲಿಗೆ ಮಹಾಭಾರತವನ್ನೇ ಗಮನಿಸಬಹುದು. ಕೆಲವು ಪಾಠಾಂತರಗಳ ಪ್ರಕಾರ ನಾರದರು ಅರ್ಜುನನ ಜನನದ ಹೊತ್ತಿಗೆ ಬಂದು ಹರಸಿದ್ದರು; ದ್ರೌಪದಿಯ ಸ್ವಯಂವರದಲ್ಲಿಯೂ ಉಪಸ್ಥಿತರಿದ್ದು ಆಶೀರ್ವದಿಸಿದ್ದರು. ಬಾಣಾಸುರನ ಸೆರೆಯಲ್ಲಿ ಅನಿರುದ್ಧನು ಇರುವ ಸಂಗತಿಯನ್ನು ಶ್ರೀಕೃಷ್ಣನಿಗೆ ಹೇಳಿದವರು ನಾರದರೇ. ಕೌರವರು ಯುದ್ಧದಲ್ಲಿ ಅಳಿಯುವ ಭವಿಷ್ಯವನ್ನೂ ಪಾಂಡವರಿಗೆ ಅರುಹಿದ್ದರು. ಧರ್ಮರಾಜನ ರಾಜಸೂಯದ ಅವಭೃಥಸ್ನಾನಕ್ಕೂ ಸಾಕ್ಷಿಯಾಗಿದ್ದರು; ಅರ್ಜುನನು ಪಾಶುಪತವನ್ನು ಗಳಿಸಿ ದೇವಲೋಕಕ್ಕೆ ಹೋದಾಗ ಅಲ್ಲಿಯ ಸ್ವಾಗತಸಮಿತಿಯಲ್ಲಿ ಕೂಡ ಇದ್ದರು. ದೇವತೆಗಳಿಗೆ ದಮಯಂತಿಯ ಸ್ವಯಂವರದ ಸುದ್ದಿಯನ್ನು ಮುಟ್ಟಿಸಿದವರು ನಾರದರೇ. ಸಗರನ ಅರವತ್ತು ಸಾವಿರ ಮಂದಿ ಮಕ್ಕಳು ಕಪಿಲಮಹರ್ಷಿಯ ಆಗ್ರಹಕ್ಕೆ ತುತ್ತಾಗಿ ಬೂದಿಯಾದ ದುರ್ವಾರ್ತೆಯನ್ನು ಆತನಿಗೆ ಹೇಳಿದ್ದೂ ಇವರೇ. ಮಾರ್ಕಂಡೇಯಮುನಿಯು ಪಾಂಡವರಿಗೆ ಹಲವು ಪುರಾಣಕಥೆಗಳನ್ನು ಹೇಳಿ ಸಾಂತ್ವನ ನೀಡುವಾಗ ಅವನ್ನು ಕೇಳಲೆಂದೇ ನಾರದರು ಕಾಮ್ಯಕವನಕ್ಕೆ ಬಂದಿದ್ದರು. ಕೌರವ-ಪಾಂಡವರ ನಡುವೆ ಸಂಧಿಯನ್ನು ಮಾಡಲು ಶ್ರೀಕೃಷ್ಣನು ಹಸ್ತಿನಾವತಿಗೆ ತೆರಳಿದಾಗ ಆತನ ಶಾಂತಿವಚನಗಳನ್ನು ಆಲಿಸಲು ನಾರದರು ಬಂದು ಸಭೆಯಲ್ಲಿ ಕುಳಿತಿದ್ದರು. ಸರಸ್ವತೀನದಿಯ ತೀರದಲ್ಲಿ ಯಾತ್ರೆ ಮಾಡುತ್ತಿದ್ದ ಬಲರಾಮನಿಗೆ ಕೌರವರು ಅಳಿದ ಸುದ್ದಿಯನ್ನು ಮುಟ್ಟಿಸಿದ ಶ್ರೇಯಸ್ಸು ಇವರದು. ಆಶ್ರಮವಾಸದಲ್ಲಿದ್ದ ಕುಂತಿ, ಗಾಂಧಾರಿ, ಸಂಜಯ ಮತ್ತು ಧೃತರಾಷ್ಟ್ರರು ಕಾಳ್ಕಿಚ್ಚಿಗೆ ಸಿಲುಕಿ ಸತ್ತ ಕೆಟ್ಟ ಸುದ್ದಿಯನ್ನು ಪಾಂಡವರಿಗೆ ತಲಪಿಸಿದ್ದಾದರೂ ನಾರದರೇ. ಶಿಶುಪಾಲನ ದೌರ್ಜನ್ಯವನ್ನು ಶ್ರೀಕೃಷ್ಣನಿಗೆ ನಾರದರೇ ಸ್ಪಷ್ಟವಾಗಿ ತಿಳಿಸಿದವರೆಂದು ಮಾಘಕವಿಯ ಶಿಶುಪಾಲವಧ ಕಾವ್ಯವು ಕಲ್ಪಿಸಿದೆ. ಈ ಕಲ್ಪನೆಯನ್ನೇ ಕನ್ನಡದ ಶ್ರೇಷ್ಠ ಕವಿಗಳಾದ ಪಂಪ-ಕುಮಾರವ್ಯಾಸರೂ ಅನುಸರಿಸಿರುವುದಿಲ್ಲಿ ಸ್ಮರಣೀಯ. ಶ್ರೀರಾಮನ ಅಜ್ಜ ಅಜನ ಪತ್ನಿ ಇಂದುಮತಿಯು ನಾರದರ ವೀಣೆಯ ಮೇಲಿದ್ದ ದೇವಲೋಕದ ಸುಮಮಾಲೆಯ ಕಾರಣದಿಂದಲೇ ತೀರಿಕೊಂಡ ಸಂಗತಿಯು ಕಾಳಿದಾಸನ ರಘುವಂಶ ಮಹಾಕಾವ್ಯದಲ್ಲಿ ಹೃದಯವೇಧಕವಾಗಿ ಬಂದಿದೆ. ಇದೇ ಕವಿಯ ವಿಕ್ರಮೋರ್ವಶೀಯ ನಾಟಕದಲ್ಲಿ ಪುರೂರವ ಮತ್ತು ಉರ್ವಶಿಯರಿಗೆ ಅವರ ದಾಂಪತ್ಯವು ಚಿರಕಾಲ ಉಳಿಯಲೆಂಬ ಇಂದ್ರನ ಸಂದೇಶವನ್ನು ತಂದವರಾದರೂ ನಾರದರೇ. ಭಾಸಕವಿಯದೆನ್ನಲಾದ ಅವಿಮಾರಕ ನಾಟಕದ ಕಡೆಗೆ ನಾರದರೇ ಬಂದು ಆ ಕೃತಿಯ ಎಲ್ಲ ಗಂಟುಗಳನ್ನೂ ಬಿಚ್ಚಿ ನಾಯಕ-ನಾಯಿಕೆಯರ ಮದುವೆಗೆ ಅನುಕೂಲ ಮಾಡಿಕೊಡುತ್ತಾರೆ. ಈ ಜಾಡನ್ನು ಹಿಡಿದು ಮುಂದೆ ಎಷ್ಟೋ ಬಗೆಯ ದೃಶ್ಯಕಾವ್ಯಗಳು ದೇಶಭಾಷೆಗಳಲ್ಲಿಯೂ ಮೂಡಿಬಂದಿವೆ; ಅವು ಉತ್ತರೋತ್ತರವಾಗಿ ಚಲನಚಿತ್ರಕ್ಕೂ ವಿಸ್ತರಿಸಿಕೊಂಡಿವೆ.
ತೆಲುಗಿನ ಅಭಿಜಾತಕಾವ್ಯಗಳಲ್ಲಂತೂ ನಾರದರ ಪಾತ್ರ ಸೊಗಸಾಗಿ ಬೆಳೆದಿದೆ. ಶ್ರೀನಾಥಕವಿಯು ಹರವಿಲಾಸ ಕಾವ್ಯದಲ್ಲಿ ನಾರದರಿಗೆ ಒಬ್ಬ ಸುಂದರಿಯನ್ನು ಸಂಗೀತವಿದ್ಯೆಯ ಶಿಷ್ಯೆಯನ್ನಾಗಿ ಕಲ್ಪಿಸಿಕೊಟ್ಟಿದ್ದಾನೆ. ನಂದಿತಿಮ್ಮನ ಕವಿಯು ತನ್ನ ಪಾರಿಜಾತಾಪಹರಣ ಕಾವ್ಯದಲ್ಲಿ ಸತ್ಯಭಾಮೆಯ ಮೂಲಕ ಪುಣ್ಯಕವ್ರತವನ್ನು ಮಾಡಿಸಿ ಶ್ರೀಕೃಷ್ಣನನ್ನೇ ದಾನವನ್ನಾಗಿ ಸ್ವೀಕರಿಸಿದ ಪುಣ್ಯವನ್ನು ನಾರದನಿಗೆ ಕೊಡಿಸಿದ್ದಾನೆ! ಇದೇ ಕಥೆ ಮುಂದೆ ನಾಟಕವಾಗಿ ರಂಗಕ್ಕೆ ಬಂದಾಗ ನಾರದರ ಪಾತ್ರ ಇಡಿಯ ಸಂವಿಧಾನಕ್ಕೇ ಸೂತ್ರಧಾರನಂತಾಗಿದೆ. ಇದರ ಮತ್ತೂ ಮುಂದುವರಿದ ಸ್ವಾರಸ್ಯವನ್ನು ಶ್ರಿಕೃಷ್ಣತುಲಾಭಾರವೆಂಬ ಚಲನಚಿತ್ರದಲ್ಲಿ ನೋಡಬಹುದು. ಪಿಂಗಳಿಸೂರನ ಕವಿಯ ಕಲಾಪೂರ್ಣೋದಯ ಕಾವ್ಯದಲ್ಲಿಯೂ ನಾರದರ ಪಾತ್ರಕ್ಕೆ ಮಾಹತ್ತ್ವವಿದೆ. ಇಲ್ಲಿ ಅವರೊಡನೆ ಗಾನಕಲೆಯ ಶಿಷ್ಯನಾಗಿ ಮಣಿಕಂಧರನೆಂಬ ಗಂಧರ್ವತರುಣನಿದ್ದಾನೆ. ತಮಿಳುನಾಡಿನ ಆಧುನಿಕ ಸಂಸ್ಕೃತಕವಿ ಮಹಾಲಿಂಗಶಾಸ್ತ್ರಿಗಳ ಶೃಂಗಾರನಾರದೀಯವೆಂಬ ಪ್ರಹಸನವು ನಾರದರನ್ನು ವಿನೂತನ ರೀತಿಯಿಂದ ಮತ್ತೆ ಹೆಣ್ಣನ್ನಾಗಿ ಮಾಡುವ ಹಾಸ್ಯಸಂದರ್ಭವನ್ನು ಒಳಗೊಂಡಿದೆ.
ದೃಶ್ಯಕಾವ್ಯಗಳಲ್ಲಿ ನಾರದರ ಮರುವುಟ್ಟು
ಇತಿಹಾಸ, ಪುರಾಣ, ಮತ್ತು ಅಭಿಜಾತಕಾವ್ಯಗಳಿಂದ ಈಚೆಗೆ ಯಕ್ಷಗಾನದಂಥ ಸಾಂಪ್ರದಾಯಿಕ ರಂಗಭೂಮಿಯಲ್ಲಿ, ಕಂಪೆನಿ ನಾಟಕಗಳಲ್ಲಿ ನಾರದರ ಪಾತ್ರ ಹೆಚ್ಚಿನ ವ್ಯಾಪ್ತಿಯನ್ನು ಗಳಿಸಿತೆನ್ನಬೇಕು. ಸಾಮಾನ್ಯವಾಗಿ ಪೌರಾಣಿಕ ಪಾತ್ರಗಳು ಈ ಬಗೆಯ ಸಂಕ್ರಮಣಕಾಲದಲ್ಲಿ, ಆಧುನಿಕತೆಯ ಹೊಸಿಲಿನಲ್ಲಿ ನಿಂತಾಗ ಸೊರಗುತ್ತವೆ ಹಾಗೂ ಸೋಲುತ್ತವೆ ಎಂದು ಸುಲಭವಾಗಿ ಊಹಿಸಬಹುದು. ಆದರೆ ನಾರದರ ಮಟ್ಟಿಗಂತೂ ಇದು ಸುಳ್ಳಾಗಿದೆಯೆಂದು ಸಂತೋಷವಾಗಿ ಹೇಳಬಹುದು. ವಿಶೇಷತಃ ಪುರಾಣಾದಿಗಳಲ್ಲಿ ಕಾಣದ - ಆದರೆ ಪೌರಾಣಿಕವೆಂದೇ ಭಾಸವಾಗುವ - ಎಷ್ಟೋ ಇತಿವೃತ್ತಗಳನ್ನು ರಂಗಕ್ಕೆ ತರುವಾಗ ಅದರ ನಿರ್ಮಾತೃಗಳಿಗೆ ಚೆನ್ನಾಗಿ ಒದಗಿಬಂದದ್ದು ನಾರದರ ಪಾತ್ರ. ಕಥೆಯ ಎಷ್ಟೋ ಸಂದರ್ಭಗಳನ್ನು ಪೋಣಿಸಲು, ಅಲ್ಲಿ ಬರುವ ರಹಸ್ಯ-ಸ್ವಾರಸ್ಯಗಳನ್ನು ರಸವತ್ತಾಗಿ ತೆರೆದಿಟ್ಟು ಬಣ್ಣಿಸಲು ಈ ಪಾತ್ರ ಅದ್ಭುತವಾಗಿ ದುಡಿಯುತ್ತ ಬಂದಿದೆ, ಬೆಳೆದಿದೆ. ದೇಶಭಾಷೆಗಳ ರಂಗಭೂಮಿಗಳಲ್ಲಿಯ ನಾರದಪಾತ್ರವು ಸಂಸ್ಕೃತರೂಪಕಗಳಲ್ಲಿ ಪ್ರಸಿದ್ಧವಾಗಿರುವ ವಿದೂಷಕನನ್ನು ಹಲವು ನಿಟ್ಟಿನಿಂದ ಹೋಲುವಂತಿದ್ದರೂ ಇದು ಮೂಲತಃ ಭಗವಂತನ ನಿತ್ಯಾವತಾರಗಳಲ್ಲಿ ಒಂದಾಗಿ, ಜ್ಞಾನಿಯೂ ಭಕ್ತನೂ ಆದ ದೇವರ್ಷಿಯದಾಗಿರುವ ಕಾರಣ ಸಾಮಾನ್ಯ ವಿದೂಷಕಪಾತ್ರಗಳ ಅಗ್ಗತನಕ್ಕಾಗಲಿ, ಎಗ್ಗತನಕ್ಕಾಗಲಿ ಎಡೆಯೀಯದು. ಹೀಗಾಗಿ ಲೋಕಹಿತಾಸಕ್ತನೂ ಭಗವದ್ಭಕ್ತನೂ ಆದ ಪ್ರಾಜ್ಞನೊಬ್ಬನು ಹಾಸ್ಯಪ್ರಜ್ಞೆಯನ್ನೂ ಮೈಗೂಡಿಸಿಕೊಂಡು ಅಣಿಮಾದಿ ಅಷ್ಟಸಿದ್ಧಿಗಳ ಆಗರವಾಗಿ ಇತಿವೃತ್ತವನ್ನು ನಡಸಿದರೆ ಇದಕ್ಕಿಂತ ಸೊಗಸಾದ ದೃಶ್ಯಕಾವ್ಯ ಮತ್ತೇನು ತಾನೆ ಇದ್ದೀತು? ಇಂಥ ರಂಗನಾರದರ ಮನೋಧರ್ಮವೇ ಆದ ಹಾಸ್ಯ ಮತ್ತು ಚಮತ್ಕಾರಗಳು ಪುರಾಣೇತಿಹಾಸಗಳಲ್ಲಿ ಕಾಣಸಿಗುವ ನಾರದಮುನಿಗಳಲ್ಲಿ ಇಲ್ಲವೆಂದರೆ ಆಶ್ಚರ್ಯವಾದೀತು. ಅಂತೆಯೇ ಕಲಹಭೋಜನರೆಂದೂ ಕಲಹಕಾರಣರೆಂದೂ ನಾರದರಿಗೆ ಬಂದಿರುವ ‘ಪ್ರಸಿದ್ಧಿ’ ಕೂಡ ಈ ಧಾರ್ಮಿಕ ವಾಙ್ಮಯದಲ್ಲಿ ತೋರುತ್ತಿಲ್ಲ. ಅಷ್ಟೇಕೆ, ಪ್ರಾಚೀನ ಸಂಸ್ಕೃತಸಾಹಿತ್ಯದಲ್ಲಿಯೂ ಇಲ್ಲವೆಂಬಷ್ಟು ವಿರಳ. ಇದೆಲ್ಲ ಈಚೆಗೆ - ಹೆಚ್ಚೆಂದರೆ ಕಳೆದೊಂದು ಸಹಸ್ರಮಾನದಲ್ಲಿ - ಬೆಳೆದುಬಂದ ಸಂಗತಿಯೆನಿಸುತ್ತದೆ. ಉದಾಹರಣೆಗೆ ನಮ್ಮ ಆದಿಕವಿ ಪಂಪನ ಭಾರತದಲ್ಲಿ ಕರ್ಣಾರ್ಜುನರ ನಡುವೆ ಕಾಳಗ ಸಾಗಿ ಕರ್ಣನು ಅಳಿದಾಗ ನಾರದನು ತನ್ನ ಕೌಪೀನವನ್ನೇ ಜಯಧ್ವಜದಂತೆ ವೀಣೆಯ ತುದಿಗೆ ಏರಿಸಿ ತನಗಿಂದು ತೃಪ್ತಿಯಾಯಿತೆಂದು ಹಾಡಿ ನಲಿದಾಡುತ್ತಾನೆ! ಅನಂತರ ತೆಲುಗಿನ ಅಭಿಜಾತಸಾಹಿತ್ಯದಲ್ಲಿ ನಾರದರ ಕಲಹರಾಸಿಕ್ಯ ರಂಗೇರಿ ಮೆರೆಯುತ್ತದೆ. ತನ್ನ ಅಂದ-ಚೆಂದಗಳಿಂದ, ಸಿರಿ-ಸೊತ್ತುಗಳಿಂದ ಮದವೇರಿ ಸವತಿಯರನ್ನು ಕಡೆಗಣಿಸುತ್ತ ಪತಿಯಾದ ಶ್ರೀಕೃಷ್ಣನನ್ನೂ ಜಗತ್ಪತಿಯೆಂದು ತಿಳಿಯದೆ ಮೆರೆಯುತ್ತಿದ್ದ ಸತ್ಯಭಾಮೆಯ ಗರ್ವವನ್ನು ನಾರದರು ರುಕ್ಮಿಣಿಯ ಪಾತಿವ್ರತ್ಯದ ಮೂಲಕ ಬಗ್ಗುಬಡಿಯುವ ಕಥೆ ಪುರಾಣಗಳಲ್ಲಿ ಇಲ್ಲವಾದರೂ ಆಂಧ್ರದ ರಂಗಭೂಮಿಯಲ್ಲಿದೆ. ಈ ಪ್ರಕರಣಗಳಲ್ಲಿ ನಾರದರ ಕಲಹಪ್ರಿಯತೆ ಮತ್ತು ವಿನೋದರಸಿಕತೆಗಳೆರಡೂ ಪರಸ್ಪರ ಸ್ಪರ್ಧೆಗೆ ನಿಂತಂತೆ ಮೆರೆದಿವೆ. ಇಂಥ ಮತ್ತೂ ಹತ್ತಾರು ಇತಿವೃತ್ತಗಳು ನಾರದಮುನಿಗಳ ನಗೆ-ಜಗಳಗಳ ಯುಗಳಗೀತಕ್ಕೆ ತಾಳ ಹಾಕಿವೆ; ಶ್ರುತಿ ಸೇರಿಸಿವೆ. ಇಂತಿದ್ದರೂ ದೇವರ್ಷಿಗಳ ಈ ಬಗೆಯ ‘ತಂದಿಟ್ಟು ತಮಾಷೆ ನೋಡುವ’ ಪ್ರವೃತ್ತಿ ಪರಿಣಾಮದಲ್ಲಿ ಲೋಕಕಲ್ಯಾಣವನ್ನೇ ಉದ್ದೇಶಿಸಿದೆ; ದುಷ್ಟದಂಡನ ಮತ್ತು ಶಿಷ್ಟಶಂಸನಗಳನ್ನೇ ಶ್ವಾಸೋಚ್ಛ್ವಾಸಗಳನ್ನಾಗಿ ಹೊಂದಿವೆ ಎಂಬಂತೆ ನಾಟಕಗಳಲ್ಲಿಯೂ ಚಲನಚಿತ್ರಗಳಲ್ಲಿಯೂ ಈ ಮುನ್ನ ರೂಪಿತವಾಗುತ್ತಿದ್ದ ಕಾರಣ ನಾರದರ ಘನತೆಗೆ ಧಕ್ಕೆಯಾಗದೆ ಸೊಗಯಿಸಿದೆ. ಈ ವಿಸ್ತರಣ ಮತ್ತು ಸ್ಪಷ್ಟೀಕರಣಗಳಿಗೆ ಕಾರಣವಿಷ್ಟೆ: ನಾನೂ ಸೇರಿದಂತೆ ಹೆಚ್ಚಿನವರಿಗೆ ನಾರದರ ಪರಿಚಯವಾಗಿರುವುದೇ ರಂಗಭೂಮಿಯ ಮತ್ತು ಅದರ ಆಧುನಿಕ ರೂಪವೆನಿಸಿದ ಸಿನೆಮಾ ಜಗತ್ತಿನ ಮೂಲಕ. ಇಲ್ಲಿರುವುದೆಲ್ಲ ಇಂಥ ಸರ್ವಾಂಗಸಂಪೂರ್ಣವಾಗಿ ವಿಕಸಿತವಾದ ನಾರದರ ಚಿತ್ರಣವೇ. ವ್ಯಾಸಭಾರತದ ಶಕುಂತಲೆಯ ಕಥೆಗಿಂತ ಕಾಳಿದಾಸನ ಶಾಕುಂತಲ ನಾಟಕದ ನಿರೂಪಣೆ ಹೇಗೆ ರಂಜನೀಯವೋ ಸುಪ್ರಸಿದ್ಧವೋ ಹಾಗೆಯೇ ಇದನ್ನೂ ಭಾವಿಸಬಹುದು.
ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ಮೂಲದ ನಾರದರ ವ್ಯಕ್ತಿತ್ವಕ್ಕಿರುವ ಗೀತ-ವಾದ್ಯಗಳ ನಂಟು ಬೃಹದಾಕಾರವಾಗಿ ಬೆಳೆದು ವಿಶ್ವರೂಪವನ್ನೇ ತಾಳಿದೆ. ಇದು ನಮ್ಮ ದೃಶ್ಯಕಾವ್ಯಗಳಿಗೆ ಶ್ರವ್ಯಕಾವ್ಯಗಳ ಸೌಂದರ್ಯವನ್ನು ಮಿಗಿಲಾಗಿ ತುಂಬಿಕೊಟ್ಟಿವೆ. ಎಷ್ಟರಮಟ್ಟಿಗೆಂದರೆ ನಮ್ಮ ಶಾಸ್ತ್ರೀಯ ಸಂಗೀತದ ಸುಂದರವೂ ಸಾರವತ್ತೂ ಆದ ಎಷ್ಟೋ ಮಾಧುರ್ಯಗಳು ನಾರದಪಾತ್ರದಿಂದಾಗಿಯೇ ಉಳಿದಿವೆ, ಬೆಳೆದಿವೆ. ವಿಶೇಷತಃ ಕಂಪೆನಿ ನಾಟಕಗಳ ಯೋಗದಾನವಿಲ್ಲಿ ಸ್ಮರಣೀಯ. ಕನ್ನಡ, ತಮಿಳು, ತೆಲುಗು, ಮರಾಠಿ, ಹಿಂದೀ ಮುಂತಾದ ಎಲ್ಲ ಭಾಷೆಗಳಲ್ಲಿಯೂ ಈ ನಾದಮೋದ ನಾರದರ ಮೂಲಕ ನಮಗೆ ಆಯತ್ತವಾಗಿದೆ. ನಾಟ್ಯಶಾಸ್ತ್ರವು ಎಲ್ಲ ರೂಪಕಗಳಲ್ಲಿಯೂ ಇರಲೇಬೇಕೆಂದು ವಿಧಿಸುವ ಐದು ಬಗೆಯ ಧ್ರುವಗೀತಗಳೆಂಬ ಹಾಡುಗಳಲ್ಲಿ ಹೆಚ್ಚಿನ ಪ್ರಕಾರಗಳೆಲ್ಲ ನಾರದರ ಪಾತ್ರದಲ್ಲಿ ಬರಬಹುದಾದರೂ ‘ಪ್ರಾವೇಶಿಕೀ ಧ್ರುವಾ’ (ಪ್ರವೇಶದ ಹಾಡು) ಎಂಬುದು ಇದಕ್ಕಾಗಿಯೇ ಹೇಳಿ ಮಾಡಿಸಿದಂತಿದೆ. ಇನ್ನು ನಡುನಡುವೆ ಬರಬಹುದಾದ ಹಾಡುಗಳಿಗೂ ಕೊರತೆಯಿಲ್ಲದ ಕಾರಣ ‘ಅಂತರಾ ಧ್ರುವಾ’ ಎಂಬ ಗೀತವೂ ನಾರದರಿಗೆ ಒಗ್ಗಿಬಂದಿದೆ. ವಿಸ್ತಾರವಾದ ರಾಗಾಲಾಪನೆ, ಸಮೃದ್ಧವಾದ ತಾನವಿಸ್ತಾರ ಹಾಗೂ ಅಚ್ಚುಕಟ್ಟಾದ ಸ್ವರಕಲ್ಪನೆಗಳು ನಾರದರ ಹಾಡುಗಳಲ್ಲಿ ಆನಂದನರ್ತನ ಮಾಡಿವೆ. ಕಳೆದ ಶತಮಾನದ ರಂಗಭೂಮಿಯಲ್ಲಿ ಮಿಕ್ಕ ಪ್ರಮುಖ ಪಾತ್ರಗಳಿಗೆ ಹೇಗೋ ಹಾಗೆಯೇ ನಾರದರಿಗಾಗಿ ಕೂಡ ನೂರಾರು ಪ್ರಗಲ್ಭ ರಾಗಗಳು ಬಳಕೆಗೊಳ್ಳುತ್ತಿದ್ದರೂ ಅನಂತರದ ಕಾಲದಲ್ಲಿ - ಮುಖ್ಯವಾಗಿ ಚಲನಚಿತ್ರಯುಗದಲ್ಲಿ - ವಿಶೇಷತಃ ಮೋಹನ, ಕಲ್ಯಾಣಿ, ಹಿಂದೋಳ, ಆಭೇರಿ, ದುರ್ಗಾ, ಆರಭಿ, ಕಾಪಿ, ತಿಲಂಗ್, ಬಾಗೇಶ್ರೀ, ದೇಶ್, ಹಂಸಧ್ವನಿ, ಬೃಂದಾವನಿಗಳಂಥ ಹತ್ತಾರು ಆಕರ್ಷಕ ರಾಗಗಳಲ್ಲಿರುವ ಎಷ್ಟೋ ಹಾಡುಗಳು ನಾರದರಿಗಾಗಿಯೇ ರೂಪುಗೊಂಡಿವೆ. ನಮ್ಮ ಕಂಪೆನಿ ನಾಟಕಗಳು ನಾರದರ ನೂರಾರು ಹಾಡುಗಳನ್ನು ಒಳಗೊಂಡಿವೆ. ನಾನು ಆ ಎಲ್ಲ ರಂಗಪ್ರಯೋಗಗಳನ್ನು ಕಂಡಿಲ್ಲವಾದರೂ ಹತ್ತಾರು ಒಳ್ಳೆಯ ರಂಗಗೀತಗಳನ್ನು ಬಲ್ಲೆ. ತತ್ಕ್ಷಣಕ್ಕೆ ನೆನಪಿಗೆ ಬರುವ ಕೆಲವು ಹಾಡುಗಳು ಹೀಗಿವೆ: ‘ನೀರಜನಯನ’ (ಮಾಂಡ್), ‘ಭಾನುಕೋಟಿತೇಜ’ (ಮಧ್ಯಮಾವತಿ), ‘ಶೇಷತಲ್ಪಶಯನ’ (ಷಣ್ಮುಖಪ್ರಿಯ), ‘ಗೋಪಾಲ ಮಾಂ ಪಾಲಯ’ (ಕಲ್ಯಾಣಿ), ‘ದೇವ ಇದು ನಿನ್ನ ಲೀಲೆ’ (ಮೋಹನ), ‘ಶಿವನಾಮ ಭವತರಣ’ (ಆಭೇರಿ), ‘ಮುರಳಿಮೋಹನ’ (ದುರ್ಗಾ), ‘ಬಾ ಬಾ ಬಾರೆನ್ನ ದೊರೆಯೇ’ (ಆಭೋಗಿ), ‘ಯಾದವಕುಲನಾಥ’ (ಬಿಲಹರಿ) ಮುಂತಾದುವು.
ಇವೆಲ್ಲ ನಾರದರು ಹಾಡುವ ಹಾಡುಗಳನ್ನು ಕುರಿತ ಮಾತಾಯಿತು. ಆದರೆ ಇಂಥ ಹಾಡುಹೂಗಳನ್ನು ಹರಿನಾಮದ ನೂಲಿನಲ್ಲಿ ಕಟ್ಟಿ ಕೊರಳಲ್ಲಿ ತಳೆದು ಭಕ್ತಿ-ಜ್ಞಾನ-ವೈರಾಗ್ಯಗಳನ್ನು ಪರಿಮಳವಾಗಿ ಬಿಂಬಿಸಬಲ್ಲ ಈ ದೇವರ್ಷಿಗಳನ್ನೇ ಕುರಿತ ರಚನೆಗಳು ಉಂಟೇ? ನಮ್ಮ ಪುರಂದರದಾಸರನ್ನು ನಾರದರ ಅವತಾರವೆಂದು ವೈಷ್ಣವ ಸಂಪ್ರದಾಯ ನಂಬುತ್ತದೆ. ಇವರನ್ನು ಅನೇಕ ಹರಿದಾಸರು ಹಾಡಿ ಕೊಂಡಾಡಿದ್ದಾರೆ. ಆದರೆ ಸಾಕ್ಷಾತ್ ನಾರದರ ಮೇಲಣ ಹಾಡುಗಳು ಕಡಮೆ. ಈ ನಿಟ್ಟಿನಲ್ಲಿ ದೇಶದ ಅತ್ಯುತ್ತಮ ವಾಗ್ಗೇಯಕಾರರಲ್ಲಿ ಒಬ್ಬರಾದ ತ್ಯಾಗರಾಜಸ್ವಾಮಿಗಳ ನಾಲ್ಕು ರಚನೆಗಳು ಪರಿಶೀಲನೀಯ: ‘ಶ್ರೀನಾರದಮೌನಿ ಗುರುರಾಯ’ (ಭೈರವಿ), ‘ಶ್ರೀನಾರದ ನಾದಸರಸೀರುಹಭೃಂಗ’ (ಕಾನಡಾ), ‘ನಾರದ ಗುರುಸ್ವಾಮಿ’ (ದರ್ಬಾರ್) ಮತ್ತು ‘ವರನಾರದ’ (ವಿಜಯಶ್ರೀ). ‘ಸ್ವರಾರ್ಣವ’ವೆಂಬ ಅಪೂರ್ವ ಸಂಗೀತಗ್ರಂಥವನ್ನು ನೀಡಿ ಹರಸುವ ಮೂಲಕ ನಾರದರು ತ್ಯಾಗರಾಜರಿಗೆ ಗಾನಕಲೆಯ ಗುರುವಾದರೆಂದು ಜನಶ್ರುತಿಯುಂಟು. ಈ ಹಿನ್ನೆಲೆಯಲ್ಲಿ ಈ ಹಾಡುಗಳ ಪಲ್ಲವಿಯಲ್ಲಿಯೇ ಎದ್ದುಕಾಣುವ ‘ಗುರು’ ಶಬ್ದದ ಬಳಕೆ ಗಮನಾರ್ಹ.
ಚಲನಚಿತ್ರಗಳಲ್ಲಿ ಕಂಡುಬರುವ ನಾರದಪಾತ್ರವನ್ನು ಗಮನಿಸುವುದಾದರೆ ಕನ್ನಡವೂ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳ ಪೌರಾಣಿಕ ಸಿನೆಮಾಗಳಲ್ಲಿ ಹೆಚ್ಚು-ಕಡಮೆ ಒಂದೇ ಬಗೆಯ ‘ಟ್ರೀಟ್‌ಮೆಂಟ್’ಅನ್ನು ಕಾಣಬಹುದು. ಆದರೂ ಈ ವಿಷಯದಲ್ಲಿ ದಕ್ಷಿಣಭಾರತದವರದೇ ಮೇಲುಗೈ. ಕನ್ನಡದಲ್ಲಿ ಅನೇಕ ಪೌರಾಣಿಕ ಚಿತ್ರಗಳು ನಾರದರನ್ನು ಒಳಗೊಂಡಿವೆಯಾದರೂ ರಾಜ್ ಕುಮಾರ್ ಅಭಿನಯಿಸಿದ ‘ಮೂರೂವರೆ ವಜ್ರಗಳು’ ಎಂಬ ಸಿನೆಮಾ ವಿಶಿಷ್ಟವಾದುದೆಂದು ತೋರುತ್ತದೆ. ಏಕೆಂದರೆ ಇಲ್ಲಿ ನಾರದರನ್ನೇ ಕೇಂದ್ರದಲ್ಲಿರಿಸಿಕೊಂಡು ಇಡಿಯ ಚಿತ್ರ ಹರಳುಗಟ್ಟಿದೆ. ಇದಾದ ಬಳಿಕ ಅಶ್ವತ್ಥ್ ಅವರು ನಾರದನಾಗಿ ನಟಿಸಿದ ‘ಸ್ವರ್ಣಗೌರಿ’ ಚಿತ್ರ ಗಮನಾರ್ಹ. ಇಲ್ಲಿಯೂ ನಾರದಪಾತ್ರ ಕೇಂದ್ರಸ್ಥಾನದಲ್ಲಿದೆ. ತೆಲುಗಿನ ಕೆಲವೊಂದು ಜಾನಪದ ಹಾಗೂ ಒಂದೆರಡು ಸಾಮಾಜಿಕ ಚಿತ್ರಗಳಲ್ಲಿ ನಾರದಪಾತ್ರ ಮಿಂಚಿತ್ತಾದರೂ ಅದನ್ನೇ ಕೇಂದ್ರದಲ್ಲಿರಿಸಿ ಪೂರ್ಣವಾಗಿ ಬೆಳೆಸಿ ಸಾಮಾಜಿಕ ಸಿನೆಮಾವನ್ನು ರೂಪಿಸಿದ ಖ್ಯಾತಿ ಕನ್ನಡದ ‘ನಾರದವಿಜಯ’ಕ್ಕೆ ದಕ್ಕುತ್ತದೆ. ಆದರೆ ಇಲ್ಲಿ ಅನಂತನಾಗ್ ಅವರ ಶೈಲೀಕೃತವಲ್ಲದ ನಟನೆ ನಾರದಪಾತ್ರಕ್ಕೆ ಅಷ್ಟಾಗಿ ಸರಿಯೆನಿಸದು. ಇನ್ನು ಕನ್ನಡಚಿತ್ರಗಳ ನಾರದರ ಗೀತಗಳಿಗೆ ಬರುವುದಾದರೆ ನನ್ನ ಮನಸ್ಸಿನಲ್ಲಿ ಮೊದಲು ಸುಳಿಯುವುದು ‘ನಟವರ ಗಂಗಾಧರ’ (ಸ್ವರ್ಣಗೌರಿ), ‘ಬೊಂಬೆಯಾಟವಯ್ಯ’ (ಶ್ರೀಕೃಷ್ಣ ಗಾರುಡಿ), ‘ರಾಮನ ಅವತಾರ’ (ಭೂಕೈಲಾಸ), ‘ನಮೋ ನಾರಾಯಣ’ (ವಾಲ್ಮೀಕಿ) ‘ಜಯ ಜಯ ಲೋಕಾವನ’ (ಮಹದೇಶ್ವರಪೂಜಾಫಲ), ‘ಜಗದೀಶನಾಡುವ ಜಗವೇ ನಾಟಕರಂಗ’ (ಶ್ರೀರಾಮಾಂಜನೇಯಯುದ್ಧ) ‘ಇದು ಎಂಥ ಲೋಕವಯ್ಯ’ (ನಾರದವಿಜಯ) ಮುಂತಾದ ಹತ್ತಾರು ಮನದುಂಬುವ ಹಾಡುಗಳು.
ಪೌರಾಣಿಕ ಚಲನಚಿತ್ರಗಳಲ್ಲಿ ನಾರದರ ಪಾತ್ರವನ್ನು ತೆಲುಗಿನ ಸಿನೆಮಾ ರಂಗದವರಂತೆ ಬೆಳೆಸಿದವರು ಮತ್ತೊಬ್ಬರಿಲ್ಲ. ಅಲ್ಲಿಯ ನೂರಾರು ಚಿತ್ರಗಳಲ್ಲಿ ನಾರದರು ವಾರ್ತಾವಾಹಕರಾಗಿ, ವಿನೋದಕಾರಕರಾಗಿ, ಕಥಾನಕದ ಸೂತ್ರಧಾರರಾಗಿ, ಭಕ್ತಿ ಮತ್ತು ವೇದಾಂತಗಳ ಬೋಧಕರಾಗಿ, ಸುಮಧುರ ಗೀತಗಳ ಗಾಯಕರಾಗಿ, ರಸಮಯ ಸಂಭಾಷಣೆಗಳ ವಕ್ತಾರರಾಗಿ ಮೆರೆದಿದ್ದಾರೆ. ಈ ಚಿತ್ರರಂಗದಲ್ಲಿ ಹತ್ತಾರು ನಟರು ನಾರದಪಾತ್ರವನ್ನು ವಹಿಸಿದ್ದರೂ ಶ್ರೀಕೃಷ್ಣ, ಶ್ರೀರಾಮ ಮುಂತಾದ ಪಾತ್ರಗಳಿಗೆ ಎನ್. ಟಿ. ರಾಮರಾವ್ ಹೇಗೋ ಹಾಗೆ ನಾರದಪಾತ್ರಕ್ಕೆ ತಾನೇ ಸಾಟಿ ಎಂದು ನಿರೂಪಿಸಿಕೊಂಡ ವರನಟ ಕಾಂತಾರಾವ್. ಇವರು ‘ಶ್ರೀಕೃಷ್ಣಾರ್ಜುನಯುದ್ಧಂ’, ‘ಶ್ರೀಕೃಷ್ಣತುಲಾಭಾರಂ’, ‘ಶ್ರೀಕೃಷ್ಣಾಂಜನೇಯಯುದ್ಧಂ’, ‘ಶ್ರೀರಾಮಾಂಜನೇಯಯುದ್ಧಂ’, ‘ಶ್ರೀಕೃಷ್ಣವಿಜಯಂ’ ಮೊದಲಾದ ಹತ್ತಾರು ಸೊಗಸಾದ ಸಿನೆಮಾಗಳಲ್ಲಿ ಅದ್ಭುತವಾಗಿ ನಟಿಸಿ ಆ ಪಾತ್ರಕ್ಕೆ ಜೀವಕಳೆಯನ್ನು ತುಂಬಿದ್ದಾರೆ. ತೆಲುಗಿನ ಈ ಸಮೃದ್ಧಿಯ ಮುಂದೆ ಮಿಕ್ಕ ಭಾಷೆಗಳ ಚಿತ್ರಗಳು ಸಪ್ಪೆಯೆನಿಸಿಯಾವು. ಹಿಂದಿಯಲ್ಲಿ ಹಿಂದೆ ಬಂದ ದೂರದರ್ಶನದ ಧಾರಾವಾಹಿ ‘ನಟಕಟ್ ನಾರದ್’ ಒಳ್ಳೆಯ ಕಲ್ಪನೆಯನ್ನು ಹೊಂದಿದ್ದರೂ ಆಭಿಜಾತ್ಯದ ಕೊರತೆಯಿಂದ ಸೊರಗಿತ್ತೆಂದು ನನ್ನ ನೆನಪು. ಆದರೆ ಇತ್ತೀಚಿನ ವರ್ಷಗಳಲ್ಲಿ ತೆಲುಗೂ ಸೇರಿದಂತೆ ಇಡಿಯ ಚಿತ್ರರಂಗವು ದೇವರ್ಷಿ ನಾರದರ ಪಾತ್ರವನ್ನು ಅಗ್ಗದ ವಿದೂಷಕನ ಮಟ್ಟಕ್ಕೆ ಇಳಿಸಿವೆಯೆಂಬ ಕಟುವಾಸ್ತವ ನನ್ನಲ್ಲಿ ಖೇದ-ರೋಷಗಳನ್ನು ಮೂಡಿಸುತ್ತದೆ. ಏಕೆಂದರೆ ಈ ಬಗೆಯ ಜಾಳುತನ-ಬೀಳುತನಗಳು ಸನಾತನಧರ್ಮಕ್ಕೂ ಅದು ಸಹಸ್ರಮಾನಗಳಿಂದ ನಮ್ಮಲ್ಲಿ ತುಂಬಿಕೊಟ್ಟ ರಸಮಯ ಕಲೆಗೂ ಮಾಡಿದ ಅಪಚಾರ, ಅನಾಚಾರ.
ಇರಲಿ, ಈ ಲೇಖನಕ್ಕೆ ಮಂಗಳ ಹಾಡುವಾಗ ಬೇಸರದ ಅಪಸ್ವರವೇಕೆ? ಇಷ್ಟನ್ನಂತೂ ಹೆಮ್ಮೆಯಿಂದ ಹೇಳಬಹುದು: ನಮ್ಮ ಇತಿಹಾಸ-ಪುರಾಣಲೋಕದ ನಾರದಮುನಿಗಳೇ ಇಳಿದುಬಂದು ಈವರೆಗೆ ನಮ್ಮ ಸಂಸ್ಕೃತಿಯು ಈ ಪಾತ್ರದಲ್ಲಿ ಸಾಧಿಸಿದ ವಿಕ್ರಮಗಳನ್ನು ಕಂಡರೆ ಮೆಚ್ಚಿಕೊಳ್ಳದೆ ಇರಲಾರರು. ನನ್ನ ಮನಸ್ಸಿನಲ್ಲಿ ಉಳಿದಿರುವುದಾದರೂ ಇಂಥ ನಾರದರ ದಿವ್ಯಮೂರ್ತಿಯೇ.
ಕನ್ನಡದ ಅಭಿಜಾತ ಸಾಹಿತ್ಯದಲ್ಲಿ ನಾರದರನ್ನು ಕುರಿತ ಪದ್ಯಗಳಿಗೆ ಕೊರತೆಯಿಲ್ಲ. ವಿಶೇಷತಃ ಅವರನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುವ ರಚನೆಗಳು ಯಥೇಚ್ಛವಾಗಿವೆ. ಆದರೆ ಆಧುನಿಕ ಸಾಹಿತ್ಯದಲ್ಲಿ ಇಂಥ ಕವಿತೆಗಳ ಅಭಾವ ಎದ್ದುಕಾಣುತ್ತದೆ. ಹೀಗಾಗಿ ಡಿ.ವಿ.ಜಿ. ಅವರು ‘ಕೇತಕೀವನ’ ಎಂಬ ತಮ್ಮ ಕವನಸಂಕಲನದಲ್ಲಿ ನಾರದರನ್ನು ಕುರಿತು ಬರೆದ ಒಂದು ಅರ್ಥಪೂರ್ಣ ಕಂದಪದ್ಯದಿಂದ ಈ ಲೇಖನವನ್ನು ಮುಗಿಸಬಹುದು:
ಭುವನ ಮರುಸಿಕತದೊಳು ಮಾ-
ನವಹೃದಯದ್ರವ ತರಂಗಿಣಿಯ ನಿರವಿಸುವಾ |
ಕವಿ ಗಾಯಕ ನರ್ತಕ ಪುಂ-
ಗವ ನಾರದನೋವುಗೆಮ್ಮ ಜೀವನವನಮಂ ||
Concluded.
Comments